ಮತ್ತಾಯ
13 ಆ ದಿವಸ ಯೇಸು ಮನೆಯಿಂದ ಹೊರಟು ಸಮುದ್ರ ತೀರದಲ್ಲಿ ಕುಳಿತುಕೊಂಡಿದ್ದನು; 2 ಆಗ ಬಹು ಜನರು ಅವನ ಬಳಿಗೆ ಕೂಡಿಬಂದದ್ದರಿಂದ ಅವನು ಒಂದು ದೋಣಿಯನ್ನು ಹತ್ತಿ ಕುಳಿತುಕೊಂಡನು, ಆದರೆ ಜನರೆಲ್ಲರು ಸಮುದ್ರ ತೀರದಲ್ಲೇ ನಿಂತಿದ್ದರು. 3 ಅವನು ಅವರಿಗೆ ದೃಷ್ಟಾಂತಗಳ ಮೂಲಕ ಅನೇಕ ವಿಷಯಗಳನ್ನು ತಿಳಿಸುತ್ತಾ, “ಬಿತ್ತುವವನು ಬಿತ್ತುವುದಕ್ಕೆ ಹೊರಟನು. 4 ಅವನು ಬಿತ್ತುತ್ತಿದ್ದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು ಮತ್ತು ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5 ಇನ್ನು ಕೆಲವು ಬೀಜಗಳು ಮಣ್ಣು ತೆಳ್ಳಗಿದ್ದ ಬಂಡೆಯ ಸ್ಥಳಗಳಲ್ಲಿ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ ಕಾರಣ ಅವು ಬೇಗನೆ ಮೊಳೆತವು. 6 ಆದರೆ ಬಿಸಿಲೇರಿದಾಗ ಅವು ಬಾಡಿ, ಬೇರಿಲ್ಲದ ಕಾರಣ ಒಣಗಿಹೋದವು. 7 ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಿರುವ ನೆಲದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅದುಮಿಬಿಟ್ಟವು. 8 ಆದರೆ ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಬೆಳೆಯುತ್ತಾ ಒಂದು ನೂರರಷ್ಟು ಇನ್ನೊಂದು ಅರುವತ್ತರಷ್ಟು ಮತ್ತೊಂದು ಮೂವತ್ತರಷ್ಟು ಫಲಕೊಟ್ಟವು. 9 ಕಿವಿಗಳಿರುವವನು ಆಲಿಸಲಿ” ಎಂದು ಹೇಳಿದನು.
10 ಆದಕಾರಣ ಶಿಷ್ಯರು ಅವನ ಬಳಿಗೆ ಬಂದು, “ನೀನು ದೃಷ್ಟಾಂತಗಳನ್ನು ಉಪಯೋಗಿಸಿ ಅವರೊಂದಿಗೆ ಮಾತಾಡುವುದೇಕೆ?” ಎಂದು ಕೇಳಿದರು. 11 ಆಗ ಅವನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದು: “ಸ್ವರ್ಗದ ರಾಜ್ಯದ ಪವಿತ್ರ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವು ನಿಮಗೆ ಕೊಡಲ್ಪಟ್ಟಿದೆ, ಆದರೆ ಆ ಜನರಿಗೆ ಅದು ಕೊಡಲ್ಪಟ್ಟಿಲ್ಲ. 12 ಏಕೆಂದರೆ ಇದ್ದವನಿಗೆ ಹೆಚ್ಚು ಕೊಡಲ್ಪಡುವುದು ಮತ್ತು ಅವನು ಸಮೃದ್ಧಿ ಹೊಂದುವನು; ಆದರೆ ಇಲ್ಲದವನಿಂದ ಇದ್ದದ್ದೂ ತೆಗೆದುಕೊಳ್ಳಲ್ಪಡುವುದು. 13 ಆದುದರಿಂದಲೇ ನಾನು ದೃಷ್ಟಾಂತಗಳನ್ನು ಉಪಯೋಗಿಸಿ ಅವರೊಂದಿಗೆ ಮಾತಾಡುತ್ತೇನೆ. ಏಕೆಂದರೆ ಅವರು ಕಣ್ಣಾರೆ ನೋಡಿದರೂ ವ್ಯರ್ಥವಾಗಿ ನೋಡುತ್ತಾರೆ, ಕಿವಿಯಾರೆ ಕೇಳಿದರೂ ವ್ಯರ್ಥವಾಗಿ ಕೇಳುತ್ತಾರೆ ಮತ್ತು ಅದರ ಅರ್ಥವನ್ನೂ ಗ್ರಹಿಸುವುದಿಲ್ಲ. 14 ಯೆಶಾಯನ ಪ್ರವಾದನೆಯು ಅವರ ವಿಷಯದಲ್ಲಿ ನೆರವೇರಿಕೆಯನ್ನು ಪಡೆಯುತ್ತಿದೆ; ಅದೇನೆಂದರೆ, ‘ನೀವು ಕೇಳಿಸಿಕೊಳ್ಳುತ್ತಲೇ ಇರುವಿರಿ ಆದರೆ ಅರ್ಥಮಾಡಿಕೊಳ್ಳುವುದೇ ಇಲ್ಲ; ನೀವು ನೋಡುತ್ತಲೇ ಇರುವಿರಿ ಆದರೆ ಎಂದೂ ಕಾಣುವುದೇ ಇಲ್ಲ. 15 ಈ ಜನರು ತಮ್ಮ ಕಣ್ಣುಗಳಿಂದ ಎಂದೂ ಕಾಣದಂತೆ, ಕಿವಿಗಳಿಂದ ಎಂದೂ ಕೇಳಿಸಿಕೊಳ್ಳದಂತೆ, ಹೃದಯದಿಂದ ಎಂದೂ ತಿಳಿದುಕೊಳ್ಳದಂತೆ ಮತ್ತು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಎಂದೂ ಹೊಂದದಂತೆ ಅವರ ಹೃದಯವು ಕೊಬ್ಬಿದೆ, ಕಿವಿಗಳು ಮಂದವಾಗಿವೆ ಹಾಗೂ ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ.’
16 “ಆದರೆ ನಿಮ್ಮ ಕಣ್ಣುಗಳು ನೋಡುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಸಂತೋಷಿತರು. 17 ಏಕೆಂದರೆ ಅನೇಕ ಪ್ರವಾದಿಗಳೂ ನೀತಿವಂತರೂ ನೀವು ನೋಡುತ್ತಿರುವ ವಿಷಯಗಳನ್ನು ನೋಡಲು ಬಯಸಿದರು, ಆದರೆ ಅವುಗಳನ್ನು ನೋಡಲಿಲ್ಲ; ನೀವು ಕೇಳಿಸಿಕೊಳ್ಳುತ್ತಿರುವ ವಿಷಯಗಳನ್ನು ಕೇಳಲು ಬಯಸಿದರು, ಆದರೆ ಅವುಗಳನ್ನು ಕೇಳಿಸಿಕೊಳ್ಳಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
18 “ನೀವು ಬಿತ್ತುವವನ ಕುರಿತಾದ ದೃಷ್ಟಾಂತಕ್ಕೆ ಕಿವಿಗೊಡಿರಿ. 19 ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಅದರ ಅರ್ಥವನ್ನು ಗ್ರಹಿಸದೇ ಇರುವಲ್ಲಿ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿರುವುದನ್ನು ಕಿತ್ತುಕೊಳ್ಳುತ್ತಾನೆ; ಇವನೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟಿರುವ ಬೀಜವಾಗಿದ್ದಾನೆ. 20 ಬಂಡೆ ತುಂಬಿರುವ ಸ್ಥಳಗಳಲ್ಲಿ ಬಿತ್ತಲ್ಪಟ್ಟಿರುವವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾನೆ. 21 ಆದರೆ ತನ್ನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಮುಂದುವರಿಯುತ್ತಾನೆ; ಬಳಿಕ ವಾಕ್ಯದ ನಿಮಿತ್ತ ಸಂಕಟ ಅಥವಾ ಹಿಂಸೆ ಬಂದ ಕೂಡಲೆ ಅವನು ಎಡವಿಬೀಳುತ್ತಾನೆ. 22 ಮುಳ್ಳುಗಿಡಗಳಿರುವ ನೆಲದಲ್ಲಿ ಬಿತ್ತಲ್ಪಟ್ಟಿರುವವನು ವಾಕ್ಯವನ್ನು ಕೇಳಿಸಿಕೊಳ್ಳುತ್ತಾನೆ, ಆದರೆ ಈ ವಿಷಯಗಳ ವ್ಯವಸ್ಥೆಯ ಚಿಂತೆಯೂ ಐಶ್ವರ್ಯದ ಮೋಸಕರವಾದ ಪ್ರಭಾವವೂ ವಾಕ್ಯವನ್ನು ಅದುಮಿಬಿಡುವುದರಿಂದ ಅವನು ಫಲವನ್ನು ಕೊಡದೆ ಹೋಗುತ್ತಾನೆ. 23 ಒಳ್ಳೆಯ ನೆಲದಲ್ಲಿ ಬಿತ್ತಲ್ಪಟ್ಟಿರುವವನು ವಾಕ್ಯಕ್ಕೆ ಕಿವಿಗೊಟ್ಟು ಅದರ ಅರ್ಥವನ್ನು ಗ್ರಹಿಸಿ ಫಲವಂತನಾಗಿ ಒಬ್ಬನು ನೂರರಷ್ಟು ಇನ್ನೊಬ್ಬನು ಅರುವತ್ತರಷ್ಟು ಮತ್ತೊಬ್ಬನು ಮೂವತ್ತರಷ್ಟು ಫಲಕೊಡುತ್ತಾನೆ.”
24 ಅವನು ಅವರಿಗೆ ಮತ್ತೊಂದು ದೃಷ್ಟಾಂತವನ್ನು ಹೇಳಿದನು. ಅದೇನೆಂದರೆ, “ಸ್ವರ್ಗದ ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25 ಜನರು ನಿದ್ರೆಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು. 26 ಅದರ ದಳವು ಮೊಳೆತು ಫಲ ಬಿಟ್ಟಾಗ ಕಳೆಗಳು ಸಹ ಕಾಣಿಸಿಕೊಂಡವು. 27 ಆಗ ಮನೆಯ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ, ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಹಾಗಾದರೆ ಅದರಲ್ಲಿ ಕಳೆಗಳು ಎಲ್ಲಿಂದ ಬಂದವು?’ ಎಂದು ಕೇಳಿದರು. 28 ಅದಕ್ಕೆ ಅವನು, ‘ಒಬ್ಬ ವೈರಿಯು ಇದನ್ನು ಮಾಡಿದನು’ ಎಂದನು. ಆಗ ಅವರು, ‘ನಾವು ಹೋಗಿ ಅವುಗಳನ್ನು ಕಿತ್ತು ಒಟ್ಟುಗೂಡಿಸಬೇಕೊ?’ ಎಂದು ಕೇಳಿದರು. 29 ಅವನು ಅವರಿಗೆ, ‘ಬೇಡ, ಒಂದುವೇಳೆ ಕಳೆಗಳನ್ನು ಕಿತ್ತು ಒಟ್ಟುಗೂಡಿಸುವಾಗ ಅವುಗಳೊಂದಿಗೆ ನೀವು ಗೋದಿಯನ್ನೂ ಕಿತ್ತುಬಿಡಬಹುದು. 30 ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಕೊಯ್ಲಿನ ಕಾಲದಲ್ಲಿ ನಾನು ಕೊಯ್ಯುವವರಿಗೆ ಮೊದಲು ಕಳೆಗಳನ್ನು ಒಟ್ಟುಗೂಡಿಸಿ ಸುಡುವುದಕ್ಕಾಗಿ ಅವುಗಳನ್ನು ಕಟ್ಟಿಡುವಂತೆ, ನಂತರ ಹೋಗಿ ಗೋದಿಯನ್ನು ನನ್ನ ಕಣಜಕ್ಕೆ ತುಂಬಿಸುವಂತೆ ಹೇಳುವೆನು’ ಎಂದನು.”
31 ಅವನು ಅವರಿಗೆ ಮತ್ತೊಂದು ದೃಷ್ಟಾಂತವನ್ನು ಹೇಳಿದನು. ಅದೇನೆಂದರೆ, “ಸ್ವರ್ಗದ ರಾಜ್ಯವು ಒಂದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ; ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು; 32 ವಾಸ್ತವದಲ್ಲಿ ಅದು ಎಲ್ಲ ಬೀಜಗಳಿಗಿಂತ ಅತಿ ಚಿಕ್ಕದಾಗಿದ್ದರೂ ಅದು ಬೆಳೆದಾಗ ಸಸ್ಯಜಾತಿಯಲ್ಲೇ ಅತಿ ಹೆಚ್ಚು ದೊಡ್ಡದಾದ ಮರವಾಗುತ್ತದೆ; ಆಗ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಿಸುತ್ತವೆ.”
33 ಅವನು ಅವರಿಗೆ ಇನ್ನೊಂದು ದೃಷ್ಟಾಂತವನ್ನು ಹೇಳಿದನು: “ಸ್ವರ್ಗದ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಒಬ್ಬ ಸ್ತ್ರೀಯು ಅದನ್ನು ತೆಗೆದುಕೊಂಡು ಮೂರು ದೊಡ್ಡಳತೆಗಳ ಹಿಟ್ಟಿನಲ್ಲಿ ಕಲಸಿಡಲು * ಆ ಹಿಟ್ಟೆಲ್ಲ ಹುಳಿಯಾಯಿತು.”
34 ಈ ಎಲ್ಲ ವಿಷಯಗಳನ್ನು ಯೇಸು ಜನರಿಗೆ ದೃಷ್ಟಾಂತಗಳ ಮೂಲಕ ತಿಳಿಸಿದನು. ವಾಸ್ತವದಲ್ಲಿ, ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ. 35 ಹೀಗೆ ಪ್ರವಾದಿಯ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, “ನಾನು ದೃಷ್ಟಾಂತಗಳ ಮೂಲಕ ಮಾತಾಡುವೆನು; ಲೋಕಾದಿಯಿಂದ ಮರೆಯಾಗಿಡಲ್ಪಟ್ಟಿರುವ ವಿಷಯಗಳನ್ನು ಪ್ರಕಟಪಡಿಸುವೆನು.”
36 ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಬಳಿಕ ಅವನು ಮನೆಯೊಳಗೆ ಹೋದನು. ಆಗ ಅವನ ಶಿಷ್ಯರು ಅವನ ಬಳಿಗೆ ಬಂದು, “ಹೊಲದಲ್ಲಿನ ಕಳೆಗಳ ಕುರಿತಾದ ದೃಷ್ಟಾಂತವನ್ನು ನಮಗೆ ವಿವರಿಸು” ಎಂದು ಹೇಳಿದರು. 37 ಅದಕ್ಕೆ ಅವನು, “ಒಳ್ಳೆಯ ಬೀಜವನ್ನು ಬಿತ್ತುವವನು ಮನುಷ್ಯಕುಮಾರನು; 38 ಹೊಲವೆಂದರೆ ಈ ಲೋಕ; ಒಳ್ಳೆಯ ಬೀಜವೆಂದರೆ ರಾಜ್ಯದ ಪುತ್ರರು; ಕಳೆಗಳೆಂದರೆ ಕೆಡುಕನ ಪುತ್ರರು; 39 ಅವುಗಳನ್ನು ಬಿತ್ತಿದ ವೈರಿಯು ಪಿಶಾಚನು. ಕೊಯ್ಲು ಅಂದರೆ ವಿಷಯಗಳ ವ್ಯವಸ್ಥೆಯ ಸಮಾಪ್ತಿ; ಕೊಯ್ಯುವವರು ದೇವದೂತರು. 40 ಆದುದರಿಂದ ಕಳೆಗಳನ್ನು ಕಿತ್ತು ಬೆಂಕಿಯಿಂದ ಸುಟ್ಟುಬಿಡುವಂತೆಯೇ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿಯೂ ನಡೆಯುವುದು. 41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು; ಅವರು ಎಡವುವಂತೆ ಮಾಡುವ ಎಲ್ಲ ವಿಷಯಗಳನ್ನೂ ಅಧರ್ಮಿಗಳಾದ ಎಲ್ಲ ಜನರನ್ನೂ ಅವನ ರಾಜ್ಯದೊಳಗಿಂದ ಒಟ್ಟುಗೂಡಿಸಿ 42 ಬೆಂಕಿಯ ಕುಲುಮೆಗೆ ಹಾಕಿಬಿಡುವರು. ಅಲ್ಲಿ ಅವರ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು. 43 ಆ ಸಮಯದಲ್ಲಿ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು. ಕಿವಿಗಳಿರುವವನು ಆಲಿಸಲಿ.
44 “ಸ್ವರ್ಗದ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ಕಂಡುಕೊಂಡು ಅಡಗಿಸಿಟ್ಟು ತನಗಾದ ಸಂತೋಷದ ನಿಮಿತ್ತ ಅವನು ಹೋಗಿ ತನ್ನ ಬಳಿಯಿರುವುದನ್ನೆಲ್ಲ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
45 “ಇದಲ್ಲದೆ ಸ್ವರ್ಗದ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುತ್ತಾ ಹೋಗುವ ಒಬ್ಬ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. 46 ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡಾಗ ಅವನು ಹೋಗಿ ಒಡನೆಯೇ ತನ್ನ ಬಳಿಯಿರುವುದನ್ನೆಲ್ಲ ಮಾರಿ ಅದನ್ನು ಕೊಂಡುಕೊಂಡನು.
47 “ಸ್ವರ್ಗದ ರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲ ರೀತಿಯ ಮೀನುಗಳನ್ನು ಹಿಡಿಯುವ ಸೆಳೆಬಲೆಗೆ ಹೋಲಿಕೆಯಾಗಿದೆ. 48 ಅದು ಮೀನುಗಳಿಂದ ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದುತಂದು ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಉಪಯೋಗಕ್ಕೆ ಬಾರದವುಗಳನ್ನು ಬಿಸಾಡಿಬಿಟ್ಟರು. 49 ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿಯೂ ಹಾಗೆಯೇ ಇರುವುದು: ದೇವದೂತರು ಹೊರಟುಬಂದು ನೀತಿವಂತರಿಂದ ಕೆಟ್ಟವರನ್ನು ಬೇರ್ಪಡಿಸಿ 50 ಅವರನ್ನು ಬೆಂಕಿಯ ಕುಲುಮೆಗೆ ಹಾಕಿಬಿಡುವರು. ಅಲ್ಲಿ ಅವರ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು.
51 “ನೀವು ಈ ಎಲ್ಲ ವಿಷಯಗಳ ಅರ್ಥವನ್ನು ಗ್ರಹಿಸಿದಿರೊ?” ಎಂದು ಕೇಳಲು ಅವರು “ಹೌದು” ಎಂದು ಉತ್ತರಿಸಿದರು. 52 ಆಗ ಅವನು ಅವರಿಗೆ, “ಹೀಗಿರಲಾಗಿ ಸ್ವರ್ಗದ ರಾಜ್ಯದ ವಿಷಯದಲ್ಲಿ ಬೋಧಿಸಲ್ಪಟ್ಟ ಪ್ರತಿಯೊಬ್ಬ ಸಾರ್ವಜನಿಕ ಉಪದೇಶಕನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುವ ಮನುಷ್ಯನಿಗೆ, ಮನೆಯ ಯಜಮಾನನಿಗೆ ಹೋಲಿಕೆಯಾಗಿದ್ದಾನೆ” ಎಂದನು.
53 ಯೇಸು ಈ ದೃಷ್ಟಾಂತಗಳನ್ನು ಹೇಳಿ ಮುಗಿಸಿದ ಬಳಿಕ ಅಲ್ಲಿಂದ ಊರಿನಾಚೆ ಹೊರಟುಹೋದನು. 54 ಮತ್ತು ತನ್ನ ಸ್ವಂತ ಊರಿಗೆ ಬಂದ ನಂತರ ಅವನು ಅವರ ಸಭಾಮಂದಿರದಲ್ಲಿ ಅವರಿಗೆ ಬೋಧಿಸಲಾರಂಭಿಸಿದನು; ಅವರು ಅದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಇವನು ಈ ವಿವೇಕವನ್ನೂ ಈ ಮಹತ್ಕಾರ್ಯಗಳನ್ನೂ ಎಲ್ಲಿಂದ ಪಡೆದುಕೊಂಡನು? 55 ಇವನು ಆ ಬಡಗಿಯ ಮಗನಲ್ಲವೆ? ಇವನ ತಾಯಿ ಮರಿಯಳಲ್ಲವೆ? ಯಾಕೋಬ, ಯೋಸೇಫ, ಸೀಮೋನ ಮತ್ತು ಯೂದರು ಇವನ ತಮ್ಮಂದಿರಲ್ಲವೆ? 56 ಇವನ ತಂಗಿಯರೆಲ್ಲರೂ ನಮ್ಮಲ್ಲಿದ್ದಾರಲ್ಲವೆ? ಹಾಗಾದರೆ ಇವನು ಈ ಎಲ್ಲ ವಿಷಯಗಳನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಹೇಳಿದರು. 57 ಹೀಗೆ ಅವರು ಅವನನ್ನು ತಾತ್ಸಾರಮಾಡತೊಡಗಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ಬೇರೆ ಎಲ್ಲ ಕಡೆಯಲ್ಲಿ ಮರ್ಯಾದೆ ಸಿಗುತ್ತದೆ, ಆದರೆ ಸ್ವಂತ ಪ್ರದೇಶದಲ್ಲಿ ಮತ್ತು ಸ್ವಂತ ಮನೆಯಲ್ಲಿ ಮರ್ಯಾದೆ ಸಿಗುವುದಿಲ್ಲ” ಎಂದು ಹೇಳಿದನು. 58 ಮತ್ತು ಅವರ ನಂಬಿಕೆಯ ಕೊರತೆಯಿಂದಾಗಿ ಅವನು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲ.