ಮತ್ತಾಯ
6 “ಜನರು ನೋಡುವುದಕ್ಕಾಗಿ ನಿಮ್ಮ ನೀತಿಯ ಕಾರ್ಯಗಳನ್ನು ಅವರ ಮುಂದೆ ತೋರಿಸದಂತೆ ಜಾಗ್ರತೆ ವಹಿಸಿರಿ; ಇಲ್ಲದಿದ್ದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಯಾವುದೇ ಪ್ರತಿಫಲ ದೊರಕುವುದಿಲ್ಲ. 2 ಆದುದರಿಂದ ನೀನು ದಾನಧರ್ಮಗಳನ್ನು ಮಾಡುತ್ತಿರುವಾಗ, ಜನರಿಂದ ಹೊಗಳಿಸಿಕೊಳ್ಳಲಿಕ್ಕಾಗಿ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಕಪಟಿಗಳು ಮಾಡುವಂತೆ ನಿನ್ನ ಮುಂದೆ ಕೊಂಬೂದಿಸಬೇಡ. ಅವರು ಪೂರ್ಣ ರೀತಿಯಲ್ಲಿ ಪ್ರತಿಫಲವನ್ನು ಹೊಂದುತ್ತಿದ್ದಾರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 3 ಆದರೆ ನೀನು ದಾನಧರ್ಮಗಳನ್ನು ಮಾಡುವಾಗ ನಿನ್ನ ಬಲಗೈ ಮಾಡುತ್ತಿರುವುದು ನಿನ್ನ ಎಡಗೈಗೆ ತಿಳಿಯದಿರಲಿ; 4 ನಿನ್ನ ದಾನಧರ್ಮಗಳು ಗೋಪ್ಯವಾಗಿರಲಿ; ಆಗ ರಹಸ್ಯವಾದ ಸ್ಥಳದಿಂದ ನೋಡುತ್ತಿರುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು.
5 “ಮಾತ್ರವಲ್ಲದೆ ನೀವು ಪ್ರಾರ್ಥನೆಮಾಡುವಾಗ ಕಪಟಿಗಳಂತೆ ಇರಬಾರದು; ಏಕೆಂದರೆ ಅವರು ಜನರಿಗೆ ಕಾಣುವಂತೆ ಸಭಾಮಂದಿರಗಳಲ್ಲಿಯೂ ಅಗಲವಾದ ಬೀದಿಯ ಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡಲು ಇಷ್ಟಪಡುತ್ತಾರೆ. ಅವರು ಪೂರ್ಣ ರೀತಿಯಲ್ಲಿ ಪ್ರತಿಫಲವನ್ನು ಹೊಂದುತ್ತಿದ್ದಾರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 6 ಆದರೆ ನೀನು ಪ್ರಾರ್ಥನೆಮಾಡುವಾಗ ನಿನ್ನ ಖಾಸಗಿ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿದ ಬಳಿಕ ರಹಸ್ಯವಾದ ಸ್ಥಳದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ರಹಸ್ಯವಾದ ಸ್ಥಳದಿಂದ ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು. 7 ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ; ಏಕೆಂದರೆ ತಾವು ತುಂಬ ಮಾತುಗಳನ್ನು ಉಪಯೋಗಿಸುವುದಾದರೆ ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ ಎಂದು ಅವರು ನೆನಸುತ್ತಾರೆ. 8 ಆದುದರಿಂದ ನೀವು ನಿಮ್ಮನ್ನು ಅವರಂತೆ ಮಾಡಿಕೊಳ್ಳಬೇಡಿ; ಏಕೆಂದರೆ ನೀವು ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ಆತನಿಗೆ ತಿಳಿದಿದೆ.
9 “ಆದುದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು:
“ ‘ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. 10 ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ. 11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು; 12 ನಮಗೆ ಪಾಪಮಾಡಿದವರನ್ನು * ನಾವು ಕ್ಷಮಿಸಿರುವಂತೆ ನಮ್ಮ ಪಾಪಗಳನ್ನೂ * ಕ್ಷಮಿಸು. 13 ನಮ್ಮನ್ನು ಪ್ರಲೋಭನೆಯೊಳಗೆ ಸೇರಿಸದೆ ಕೆಡುಕನಿಂದ ನಮ್ಮನ್ನು ತಪ್ಪಿಸು.’
14 “ನೀವು ಜನರ ಅಪರಾಧಗಳನ್ನು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು; 15 ಆದರೆ ನೀವು ಜನರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವುದಿಲ್ಲ.
16 “ನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆಮಾಡಿಕೊಳ್ಳುವುದನ್ನು ನಿಲ್ಲಿಸಿರಿ; ಏಕೆಂದರೆ ತಾವು ಉಪವಾಸ ಮಾಡುತ್ತಿದ್ದೇವೆಂಬುದನ್ನು ಜನರಿಗೆ ತೋರಿಸಲಿಕ್ಕಾಗಿ ಅವರು ಮುಖಗಳನ್ನು ವಿಕಾರಗೊಳಿಸಿಕೊಳ್ಳುತ್ತಾರೆ. ಅವರು ಪೂರ್ಣ ರೀತಿಯಲ್ಲಿ ಪ್ರತಿಫಲವನ್ನು ಹೊಂದುತ್ತಿದ್ದಾರೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 17 ಆದರೆ ನೀನು ಉಪವಾಸಮಾಡುವಾಗ ನಿನ್ನ ತಲೆಗೆ ಎಣ್ಣೆ ಹಚ್ಚಿಕೊಂಡು ನಿನ್ನ ಮುಖವನ್ನು ತೊಳೆದುಕೊ; 18 ಹೀಗೆ ಮಾಡಿದರೆ ನೀನು ಉಪವಾಸಮಾಡುತ್ತಿರುವುದು ಜನರಿಗಲ್ಲ, ರಹಸ್ಯವಾದ ಸ್ಥಳದಲ್ಲಿರುವ ನಿನ್ನ ತಂದೆಗೆ ತೋರಿಬರುವುದು; ಆಗ ರಹಸ್ಯವಾದ ಸ್ಥಳದಿಂದ ನೋಡುತ್ತಿರುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು.
19 “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; ಇಲ್ಲಿ ನುಸಿ ಮತ್ತು ಕಿಲುಬು ಅದನ್ನು ಹಾಳುಮಾಡಿಬಿಡುತ್ತದೆ; ಕಳ್ಳರು ಒಳನುಗ್ಗಿ ಕದಿಯುತ್ತಾರೆ. 20 ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯಾಗಲಿ ಕಿಲುಬಾಗಲಿ ಅದನ್ನು ಹಾಳುಮಾಡುವುದಿಲ್ಲ; ಕಳ್ಳರು ಒಳನುಗ್ಗಿ ಕದಿಯುವುದೂ ಇಲ್ಲ. 21 ನಿನ್ನ ಸಂಪತ್ತು ಇರುವಲ್ಲಿಯೇ ನಿನ್ನ ಹೃದಯವು ಸಹ ಇರುವುದು.
22 “ಕಣ್ಣು ದೇಹದ ದೀಪವಾಗಿದೆ. ನಿನ್ನ ಕಣ್ಣು ಸರಳವಾಗಿರುವಲ್ಲಿ ನಿನ್ನ ದೇಹವೆಲ್ಲ ಪ್ರಕಾಶಮಾನವಾಗಿರುವುದು; 23 ನಿನ್ನ ಕಣ್ಣು ಕೆಟ್ಟದ್ದಾಗಿರುವಲ್ಲಿ ನಿನ್ನ ಇಡೀ ದೇಹ ಕತ್ತಲಾಗಿರುವುದು. ವಾಸ್ತವದಲ್ಲಿ ನಿನ್ನಲ್ಲಿರುವ ಬೆಳಕು ಕತ್ತಲೆಯಾಗಿರುವಲ್ಲಿ, ಆ ಕತ್ತಲೆಯು ಎಷ್ಟು ಗಾಢವಾಗಿದೆ!
24 “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.
25 “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಗಳ ಕುರಿತು ನೀವು ಏನು ಊಟಮಾಡುವಿರಿ, ಏನು ಕುಡಿಯುವಿರಿ ಅಥವಾ ನಿಮ್ಮ ದೇಹಗಳಿಗೆ ಏನು ಧರಿಸಿಕೊಳ್ಳುವಿರಿ ಎಂದು ಚಿಂತೆಮಾಡುವುದನ್ನು ನಿಲ್ಲಿಸಿರಿ. ಆಹಾರಕ್ಕಿಂತ ಪ್ರಾಣವೂ ಉಡುಪಿಗಿಂತ ದೇಹವೂ ಮೇಲಾದದ್ದಲ್ಲವೇ? 26 ಆಕಾಶದ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿರಿ; ಅವು ಬೀಜವನ್ನು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಶೇಖರಿಸಿಡುವುದಿಲ್ಲ; ಹಾಗಿದ್ದರೂ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ನೀವು ಅವುಗಳಿಗಿಂತ ಹೆಚ್ಚು ಬೆಲೆಬಾಳುವವರಲ್ಲವೆ? 27 ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ * ಹೆಚ್ಚಿಸಿಕೊಳ್ಳಬಲ್ಲನು? 28 ಇದಲ್ಲದೆ ಉಡುಪಿನ ವಿಷಯದಲ್ಲಿ ನೀವು ಚಿಂತೆಮಾಡುವುದೇಕೆ? ಹೊಲದ ಲಿಲಿಹೂವುಗಳು ಬೆಳೆಯುವ ರೀತಿಯಿಂದ ಪಾಠವನ್ನು ಕಲಿಯಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ; 29 ಆದರೆ ಅವುಗಳಲ್ಲಿ ಒಂದಕ್ಕಿರುವ ಅಲಂಕಾರವು ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಲ್ಲಿದ್ದಾಗಲೂ ಇರಲಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ. 30 ಎಲೈ ಅಲ್ಪವಿಶ್ವಾಸಿಗಳೇ, ಇಂದು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಸಸ್ಯಗಳಿಗೆ ದೇವರು ಈ ರೀತಿಯಲ್ಲಿ ಉಡಿಸುತ್ತಾನಾದರೆ ನಿಮಗೆ ಇನ್ನೂ ಹೆಚ್ಚು ಉಡಿಸಿತೊಡಿಸುವನಲ್ಲವೆ? 31 ಆದುದರಿಂದ ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. 32 ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ. ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.
33 “ಆದುದರಿಂದ ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು. 34 ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.